ರೂಸ್‍ವೆಲ್ಟ್, ಥಿಯೋಡರ್
1858-1919. ಅಮೆರಿಕ ಸಂಯುಕ್ತ ಸಂಸ್ಥಾನಗಳ 26ನೆಯ ಅಧ್ಯಕ್ಷ(1901-08). ರಾಷ್ಟ್ರಧುರೀಣ, ಯೋಧ, ಅನ್ವೇಷಕ, ಗ್ರಂಥಕಾರ, ಪರಿಸರಪ್ರೇಮಿ, ಪ್ರಗತಿಪರ ಚಿಂತಕ, ಬೃಹತ್ ವ್ಯಾಪಾರ-ಕೈಗಾರಿಕರಂಗಗಳಲ್ಲಿದ್ದ ಅಡಚಣೆ- ಆತಂಕಗಳಲ್ಲಿ ಸಾರ್ವಜನಿಕ ಹಿತಗಳ ರಕ್ಷಣೆಗೆ ಶ್ರಮಿಸಿದವ. ವಿದೇಶಿ ವ್ಯವಹಾರಗಳಲ್ಲಿ ಅಮೆರಿಕದ ಪ್ರಭಾವವನ್ನು ಯುರೋಪ್-ಏಷ್ಯ ಖಂಡಗಳಿಗೆ ವಿಸ್ತರಿಸಿದವ. 

ಈತ 1858 ಅಕ್ಟೋಬರ್ 27ರಂದು ನ್ಯೂಯಾರ್ಕ್ ನಗರದಲ್ಲಿ ಜನಿಸಿದ. ಇವನ ತಂದೆ ಹಾಲೆಂಡ್ ಮೂಲದ ವರ್ತಕ; ತಾಯಿ ಮಾರ್ಥಾ ಖುಲಕ್. ಥಿಯೋಡರ್ ರೂಸ್‍ವೆಲ್ಟ್ ಬಾಲ್ಯದಲ್ಲಿ  ಆಸ್ತಮಾ ರೋಗ ಮತ್ತು ಕಣ್ಣಿನ ಬೇನೆಯಿಂದ ಬಳಲುತ್ತಿದ್ದ. ಸತತವಾಗಿ ಅಂಗಸಾ ಧನೆ, ಮುಷ್ಟಿಕಾಳಗ, ಕುದುರೆ ಸವಾರಿ ಹಾಗೂ ದೀರ್ಘ ಕಾಲ್ನಡಿಗೆ ಅಭ್ಯಾಸ ಮಾಡಿ ತನ್ನ ವ್ಯಾಧಿಗಳನ್ನು ಪರಿಹರಿಸಿಕೊಂಡಿದ್ದಲ್ಲದೆ ಉತ್ತಮ ದೇಹದಾಢ್ರ್ಯಕ್ಕೆ ಮಾದರಿಯಾದ. ಹಾರ್ವರ್ಡ್ ಕಾಲೇಜು ಸೇರಿ 1880ರಲ್ಲಿ ಬಿ.ಎ. ಪದವಿ ಪಡೆದ. ಓದುವುದರಲ್ಲಿ ಬುದ್ಧಿವಂತನೆನಿಸಿದ.
ಈತ ತನ್ನ ಕಾಲೇಜು ದಿನಗಳಲ್ಲೇ ಹಿಸ್ಟರಿ ಆಫ್ ದ ನೇವಲ್ ವಾರ್ ಆಫ್ (1812) ಎಂಬ ಗ್ರಂಥವನ್ನು ಬರೆಯಲು ಪ್ರಾರಂಭಿಸಿದ್ದ. ನೇರನುಡಿ, ನಿಷ್ಕಪಟತೆ, ಹೊಗಳಿಕೆಗೆ ಉಬ್ಬದ ಗುಣ ಗಳನ್ನು ಮೈಗೂಡಿಸಿಕೊಂಡು ನಾಯಕನಾಗುವ ವ್ಯಕ್ತಿತ್ವ ಪಡೆದ. ಇವನು 1881ರಲ್ಲಿ ನ್ಯೂಯಾರ್ಕ್ ಅಸೆಂಬ್ಲಿಗೆ ಚುನಾಯಿತನಾದ. ಮುಂದೆ ತನ್ನ ನಿರ್ಭೀತ ಮಾತು, ದೂರದೃಷ್ಟಿ ಹಾಗೂ ಪರಿಶುದ್ಧ ಹಸ್ತದಿಂದಾಗಿ ರಿಪಬ್ಲಿಕನ್ ಪಕ್ಷದ ಪ್ರಮುಖ ಸದಸ್ಯರಲ್ಲೊಬ್ಬನೆನಿಸಿದ. ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಅಮೆರಿಕದಲ್ಲಿ ಕಂಡುಬಂದ ಪ್ರಗತಿಪರ ಚಳವಳಿಯ ಪ್ರಮುಖ ಮುಖಂಡರಲ್ಲೊಬ್ಬನಾದ.

ಈತ 1899ರಲ್ಲಿ ಬಾಲ್ಟಿಮೋರ್‍ನಲ್ಲಿ ನಡೆದ ಲೋಕಸೇವಾ ಸುಧಾರಣೆಗಳ ಸಮ್ಮೇಳನದಲ್ಲಿ ಭಾಗವಹಿಸಿ ಸರ್ಕಾರಿ ನೌಕರಿಗಳಿಗೆ ನೇಮಿಸುವಲ್ಲಿ ದಕ್ಷತೆಗೆ ಆದ್ಯತೆ ನೀಡಬೇಕೆಂದು ಪ್ರತಿಪಾದಿಸಿದ. ಇವನ ಪ್ರಗತಿಪರ ವಿಚಾರಗಳಿಂದ ಪ್ರಭಾವಿತನಾದ ಆಗಿನ ಅಧ್ಯಕ್ಷ ಹ್ಯಾರಿಸನ್ ಈತನನ್ನು ಲೋಕಸೇವಾ ಆಯೋಗದ ಸದಸ್ಯನನ್ನಾಗಿ ನೇಮಿಸಿದ. ಮೂರು ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದು ಅನಂತರ ನ್ಯೂಯಾರ್ಕ್ ನಗರದ ಪೊಲೀಸ್ ಕಮೀಷನರ್ ಆಗಿ ನೇಮಕಗೊಂಡ. ಎರಡು ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದು ಅನೇಕ ಸುಧಾರಣೆಗಳನ್ನು ಮಾಡಿದ. ಅನಂತರ ನೌಕಾ ಸೇವಾ ಇಲಾಖೆಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ನೇಮಕಗೊಂಡ. ಸ್ವಲ್ಪ ಕಾಲದಲ್ಲೇ ಸ್ಪೇನ್ ದೇಶದೊಡನೆ ಯುದ್ಧ ಘೋಷಿತವಾದಾಗ ಯೋಧನಾಗಿ ರಫ್ ರೈಡರ್ಸ್ ಪಡೆಯ ನಾಯಕನಾಗಿ ಹೋರಾಡಿದ. ಲೆಫ್ಟಿನೆಂಟ್ ಕರ್ನಲ್ ಮತ್ತು ಕರ್ನಲ್ ಸ್ಥಾನಗಳಲ್ಲಿದ್ದು ಸೇವೆ ಸಲ್ಲಿಸಿದ. ಯುದ್ಧಾನಂತರ ಈತನಿದ್ದ ರೆಜಿಮೆಂಟ್ ವಿಸರ್ಜನೆಗೊಂಡ ಮೇಲೆ ಪುನಃ ರಾಜಕೀಯ ಕ್ಷೇತ್ರ ಪ್ರವೇಶಿಸಿದ.
ರಿಪಬ್ಲಿಕನ್ ಪಕ್ಷದಿಂದ ನ್ಯೂಯಾರ್ಕ್ ನಗರದ ಗವರ್ನರ್ ಹುದ್ದೆಗೆ ಸ್ಪರ್ಧಿಸಿ ಜಯಶೀಲನಾದ. ಎಲ್ಲ ಪಕ್ಷಗಳ ಸ್ವಾರ್ಥಪರರನ್ನು ದೂರವಿರಿಸಿ ಸ್ವಚ್ಛ ಆಡಳಿತ ನೀಡಲು ಕ್ರಮಕೈಗೊಂಡ. ಈ ಕ್ರಮದಿಂದ ಅತೃಪ್ತಿಗೊಂಡ ಪಕ್ಷದ ವರಿಷ್ಠರು 1900ರಲ್ಲಿ ಅಧಿಕಾರವಿಲ್ಲದ ಉಪಾಧ್ಯಕ್ಷ ಪದವಿಗೆ ಇವನನ್ನು ಅಭ್ಯರ್ಥಿಯನ್ನಾಗಿಸಿದರೂ ಅಧ್ಯಕ್ಷ ಮ್ಯಾಕಿಸ್ಲೆಯ ಹತ್ಯೆಯ ಅನಂತರ 1901ರ ಸೆಪ್ಟೆಂಬರ್‍ನಲ್ಲಿ ಅಧ್ಯಕ್ಷ ಪದವಿ ಪಡೆದ. 

ಅಮೆರಿಕದ ಅಧ್ಯಕ್ಷನಾಗಿ ರೂಸ್‍ವೆಲ್ಟ್ ಮಾಡಿದ ಸಾಧನೆಗಳು  ಇತಿಹಾಸದ ಮೇಲೆ ಮಹತ್ವಪೂರ್ಣವಾದ ಪ್ರಭಾವ ಬೀರಿದವು. ಇವನು ಸ್ವಭಾವತಃ ಉದಾರವಾದಿಯಾಗಿದ್ದು ಅಂದು ನಡೆಯುತ್ತಿದ್ದ ಪ್ರಗತಿಪರ ಚಳವಳಿಯ ಗುರಿಗಳು ಈಡೇರಲು ಹೃದಯಪೂರ್ವಕವಾಗಿ ಶ್ರಮಿಸಿದ. ಅನೇಕ ವರ್ಷಗಳಿಂದ ಸರ್ಕಾರದ ಆಡಳಿತ ಯಂತ್ರ ಜಡ್ಡುಗಟ್ಟಿ ಹೋಗಿತ್ತು. ಭ್ರಷ್ಟಾಚಾರ ಮನೆಮಾತಾಗಿತ್ತು. ಇವನು ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲೇ ಮಾಡಿದ ಮೊದಲ ಕೆಲಸವೆಂದರೆ ಆಡಳಿತವನ್ನು ಚುರುಕುಗೊಳಿಸಿದ್ದು.

ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಬೇರುಬಿಟ್ಟಿದ್ದ ವೃತ್ತಿನಿರತ ರಾಜಕಾರಣಿಗಳನ್ನು ನಿವಾರಿಸಿ ಯುವಕರಿಗೆ ಅವಕಾಶ ಕಲ್ಪಿಸಲು ಅನೇಕ ಚುನಾವಣಾ ಸುಧಾರಣೆಗಳನ್ನು ಈತ ಜಾರಿಗೆ ತಂದ. ಕಾನೂನು ರಚಿಸುವಲ್ಲಿ ಮತ್ತು ಅವುಗಳ ಅರ್ಹತೆ ನಿರ್ಧರಿಸುವಲ್ಲಿ ಮತದಾರರಿಗೆ ಅಧಿಕಾರ ಕೊಟ್ಟ. ಬಹುಕಾಲದಿಂದ  ನೂರಾರು ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆಗಳು ಪ್ರಮುಖಪಾತ್ರ ವಹಿಸಿ ಅಮೆರಿಕದ ಆರ್ಥಿಕತೆಯ ಮೇಲೆ ಹಿಡಿತ ಹೊಂದಿದ್ದವು. ಈ ಸಂಸ್ಥೆಗಳ ಆಡಳಿತ ನಿರ್ವಹಣೆಗೆ ಅನೇಕ ನಿರ್ಬಂಧಗಳನ್ನು ವಿಧಿಸಿ ಬಿಡಿ ವ್ಯಕ್ತಿಗಳು ಸಾಹಸೋದ್ಯಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ. ಕಾನೂನು ವಿರುದ್ಧ ನಡೆಯುವವರನ್ನು ಪತ್ತೆ ಹಚ್ಚಲು 1903ರಲ್ಲಿ ಒಂದು ಇಲಾಖೆಯನ್ನು ಸ್ಥಾಪಿಸಿದ.

ಕಲ್ಲಿದ್ದಲು ಗಣಿ ಕಾರ್ಮಿಕರು ಮತ್ತು ನೌಕರರು ನಡೆಸುತ್ತಿದ್ದ ಮುಷ್ಕರಕ್ಕೆ ಸಹಾನುಭೂತಿ ತೋರಿಸಿದ. ಅವರ ಸಂಬಳ ಸಾರಿಗೆ ಹೆಚ್ಚಳಕ್ಕೆ ಕಾನೂನು ಮಾಡಿದ. ರೈಲ್ವೆ ಕಂಪನಿಗಳಿಂದ ರೈತರ ಶೋಷಣೆ ತಪ್ಪಿಸಲು ಸರಕು ಸಾಗಣೆ ಶುಲ್ಕ ವಿಧಿಸುವಲ್ಲಿ ನಿಯಂತ್ರಣ ಹೇರಿದ. ಕಲುಷಿತ ಆಹಾರ ನೀಡುವುದು ಮತ್ತು ಹಾನಿಕಾರಕ ಔಷಧಿ ನೀಡುವುದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡ.
1904ರಲ್ಲಿ ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದನಂತರ ಯಾವ ಒತ್ತಡಕ್ಕೂ ಒಳಗಾಗದೆ ಆಡಳಿತ ಸುಧಾರಣೆಗಳನ್ನು ಕೈಗೊಂಡ. ಸಾಮಾನ್ಯ ಮತ್ತು ಶ್ರೀಮಂತ ಇಬ್ಬರಿಗೂ   ತನ್ನ ಕಛೇರಿ ಸಮಾನವಾಗಿ ಸದಾ ತೆರೆದಿರುತ್ತದೆ ಎಂದು ಘೋಷಿಸಿದ. ರಾಷ್ಟ್ರದ ಪ್ರಾಕೃತಿಕ ಸಂಪತ್ತನ್ನು ಕಬಳಿಸುತ್ತಿದ್ದವರಿಗೆ ಸಿಂಹಸ್ವಪ್ನವಾದ. ರಾಷ್ಟ್ರದ ಅರಣ್ಯಗಳ ಸಂರಕ್ಷಣೆಗೆ ಕಾನೂನುಗಳನ್ನು ರಚಿಸಿದ. ನೀರಾವರಿ ಪ್ರದೇಶವನ್ನು ವಿಸ್ತರಿಸುವುದರ ಮೂಲಕ ರೈತರ ಅಭಿನಂದನೆಗೆ ಪಾತ್ರನಾದ. ನ್ಯಾಯಾಲಯಗಳಿಗೆ ಹೆಚ್ಚಿನ ಅಧಿಕಾರ ನೀಡಲಾಯಿತು.

ಅಂತಾರಾಷ್ಟ್ರೀಯ ರಾಜಕೀಯದಲ್ಲೂ ಈತ ತನ್ನ ಪ್ರಭಾವ ಬೀರಿದ. ರಷ್ಯ ಮತ್ತು ಜಪಾನ್‍ಗಳ ನಡುವೆ ಯಶಸ್ವಿಯಾಗಿ ಮಧ್ಯಸ್ಥಿಕೆ ವಹಿಸಿ ಶಾಂತಿ ಸ್ಥಾಪಿಸಲು ನೆರವಾದ. 1903ರಲ್ಲಿ ಪನಾಮಾ ಕಾಲುವೆ ಪ್ರದೇಶವನ್ನು ಅಮೆರಿಕದ ವಶಕ್ಕೆ ತಂದ. ಕ್ಯೂಬದಲ್ಲಿ ಕಾನೂನು ವ್ಯವಸ್ಥೆ ಪುನರ್ ಸ್ಥಾಪನೆಯಾಯಿತು. ವೆನಿಜೂಲದಲ್ಲಿ ಮನ್ರೊ ಸೂತ್ರದ ಅನುಷ್ಠಾನವನ್ನು ಸಮರ್ಥಿಸಿದ. ಕೊಲಂಬಿಯದಿಂದ ಇಸ್ತಮಸ್ಸನ್ನು ರಕ್ಷಿಸಿದ. ಹೀಗೆ ಆಂತರಿಕ ಮತ್ತು ವಿದೇಶಿ ನೀತಿಯಲ್ಲಿ  ರೂಸ್‍ವೆಲ್ಟ್ ಹೊಸ ಅಧ್ಯಾಯ ತೆರೆದ. 1908ರಲ್ಲಿ ಅಧ್ಯಕ್ಷೀಯ ಚುನಾವಣೆ ಬಂತು. ಆಗ ತಾನು ಹಿಂದೆ ಘೋಷಿಸಿದ್ದ ಮಾತಿನಂತೆ ಸ್ಪರ್ಧಿಸದೆ ತನ್ನ ನಿಕಟವರ್ತಿ ವಿಲಿಯಂ ಹೋವರ್ಡ್ ಟ್ಯಾಪ್ಟ್ ಅಧ್ಯಕ್ಷನಾಗಲು ಸಹಾಯ ನೀಡಿದ .

ಈತ ಅಧ್ಯಕ್ಷಸ್ಥಾನ ಬಿಟ್ಟ ಅನಂತರ ಪೂರ್ವ ಆಫ್ರಿಕಕ್ಕೆ ಬೇಟೆ ಪ್ರವಾಸ ಕೈಗೊಂಡ. ಇವನು ಕೆಲವು ತಿಂಗಳುಗಳ ತರುವಾಯ ಅಲ್ಲಿಂದ ಹಿಂದಿರುಗಿದಾಗ ರಾಜಕೀಯದಲ್ಲಿ ಅನೇಕ ಬದಲಾವಣೆಗಳಾಗಿದ್ದವು. ಇವನ ಉತ್ತರಾಧಿಕಾರಿ ಟ್ಯಾಪ್ಟ್ ಜನಪ್ರಿಯತೆ ಕಳೆದುಕೊಳ್ಳುವ ಹಾದಿಯಲ್ಲಿದ್ದ. ರಿಪಬ್ಲಿಕನ್ ಪಕ್ಷದಿಂದ ಮುಂದಿನ ಬಾರಿಗೆ ಈತನೇ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಬೇಕೆಂಬ ಒತ್ತಡ ಬಂದರೂ ಪಕ್ಷದ ವರಿಷ್ಠರು ಟ್ಯಾಪ್ಟ್‍ನನ್ನು ನಾಮಕರಣ ಮಾಡಿದಾಗ ಸ್ವತಂತ್ರನಾಗಿ ಸ್ಪರ್ಧಿಸಿ ಸೋತರೂ ಟ್ಯಾಪ್ಟ್‍ನಿಗಿಂತ ಅಧಿಕ ಮತಗಳಿಸಿದ. ಡೆಮಾಕ್ರೆಟಿಕ್ ಪಕ್ಷದ ವುಡ್ರೋವಿಲ್ಸನ್ ಅಧ್ಯಕ್ಷನಾದ. ಮುಂದೆ ರಾಜಕೀಯಕ್ಕೆ ವಿದಾಯ ಹೇಳಿದ ಈತ ಸಾಹಸ ಕಾರ್ಯಗಳಲ್ಲಿ ತೊಡಗಿದ. ಒಂದನೆಯ ಮಹಾಯದ್ಧದಲ್ಲಿ ಸ್ವಯಂಸೇವಕರ ತಂಡದ ನಾಯಕನಾಗಿ ಭಾಗವಹಿಸಿದ. ಈ ಯುದ್ಧದಲ್ಲಿ ಇವನ ಎಲ್ಲ ನಾಲ್ಕು ಗಂಡು ಮಕ್ಕಳೂ ಭಾಗವಹಿಸಿದ್ದರು. ಒಬ್ಬ ಮಗನ ಬಲಿದಾನವೂ ಆಯಿತು.

ಈತ ಬಹುಮುಖ ವ್ಯಕ್ತಿತ್ವದವನು. ದ ವಿನ್ನಿಂಗ್ ಆಫ್ ದ ವೆಸ್ಟ್, ಎ ಹಿಸ್ಟರಿ ಆಫ್ ನ್ಯೂಯಾರ್ಕ್, ಆ್ಯನ್ ಆಟೋಬಯಾಗ್ರಫಿ, ಆಫ್ರಿಕನ್ ಗೇಮ್ ಟ್ರಯಲ್ಸ್, ದ ಬ್ರೆಜಿಲಿಯನ್ ವೈಲ್ಡರ್‍ನೆಸ್ ಮೊದಲಾದ ಗ್ರಂಥಗಳನ್ನು ರಚಿಸಿದ. ಇವು ಅವನ ಜೀವನಾನುಭವವನ್ನು ತಿಳಿಸುವ ಕೃತಿಗಳಾಗಿವೆ. 1906ರಲ್ಲಿ ಶಾಂತಿಪ್ರಿಯ ಕಾರ್ಯಗಳಿಗಾಗಿ ಇವನಿಗೆ ನೊಬೆಲ್ ಪ್ರಶಸ್ತಿ ಬಂತು. ಪ್ರತಿಭಾಶಾಲಿಯೂ ಧೈರ್ಯವಂತನೂ ದೇಶಪ್ರೇಮಿಯೂ, ಪ್ರಾಮಾಣಿಕನೂ ಆಗಿದ್ದ ಈತ 1919 ಜನವರಿ 5ರಂದು ನಿಧನಹೊಂದಿದ. ಇವನ ಪಾರ್ಥಿವ ಶರೀರವನ್ನು ಓಸ್ಟರ್‍ಬೇಯ `ಯಂಗ್ಸ್ ಮೆಮೋರಿಯಲ್ ಸಿಮೆಟ್ರಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

	(ಡಿ.ಎಸ್.ಜೆ.;ಐ.ಬಿ.ಪಿ.)